ಗಣೇಶ ವಿಸರ್ಜನೆಗೆ ಮುನ್ನ ಗಣಪನಿಗೆ ತೊಡಿಸಿದ ಚಿನ್ನದ ಆಭರಣ ತೆಗೆಯಲು ಮರೆತ ಕುಟುಂಬ! ಮುಂದೇನಾಯ್ತು?

262

ಪತ್ರಿಕಾ ವರದಿ ಪ್ರಕಾರ, ಬೆಂಗಳೂರಿನ ವಿಜಯನಗರದ ದಾಸರಹಳ್ಳಿ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ. ರಾಮಯ್ಯ ಮತ್ತು ಉಮಾದೇವಿ ಎಂಬ ದಂಪತಿಗಳು ಗಣೇಶ ಚತುರ್ಥಿಯಂದು ತಮ್ಮ ಮನೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಗಣೇಶ ಚತುರ್ಥಿ ಸಂದರ್ಭ ವಿಶೇಷ ಪೂಜೆಯನ್ನು ಕೂಡ ಹಮ್ಮಿಕೊಂಡಿದ್ದರು. ಮನೆಯಲ್ಲಿಟ್ಟ ಗಣಪನಿಗೆ ಹೂವಿನ ಶೃಂಗಾರ ಅಲ್ಲದೆ ತಮ್ಮ ಬಳಿ ಇದ್ದ 60 ಗ್ರಾಂ ಚಿನ್ನದ ಆಭರಣ ಕೂಡ ತೊಡಿಸಿದ್ದರು . ಇದರ ಮೌಲ್ಯ ಸರಿಸುಮಾರು 4 ಲಕ್ಷ. ಶನಿವಾರ ರಾತ್ರಿ ಪೂಜೆಯ ನಂತರ ಗಣೇಶ ವಿಸರ್ಜನೆಗೆ ಎಂದು ತಯಾರಿಸಿದ್ದ ಮೊಬೈಲ್ ಟ್ಯಾಂಕ್ ನಲ್ಲಿ ವಿಸರ್ಜನೆ ಮಾಡಿ ಬಂದಿದ್ದರು . ಆದರೆ ಮನೆಗೆ ಬಂದ ನಂತರ ಗಣಪನಿಗೆ ತೊಡಿಸಿದ ಚಿನ್ನಾಭರಣ ತೆಗೆಯದೆ ಇರುವ ವಿಷಯ ನೆನಪಾದಾಗ ಕಂಗಾಲಾಗಿ ಹೋದರು .

ಮನೆಗೆ ಬಂದ ನಂತರ ದಂಪತಿಗಳು ತಮ್ಮ ಚಿನ್ನದ ಹಾರವನ್ನು ಹುಡುಕಲು ವಿಸರ್ಜನೆ ಮಾಡಿದ ಸ್ಥಳಕ್ಕೆ ಮರಳಿದರು. ಹೂಳೆತ್ತುವ ವೇಳೆ ತೊಟ್ಟಿಯ ಬಳಿ ಇದ್ದ ಕೆಲ ಯುವಕರು ಚೈನ್ ನೋಡಿದ್ದು ನಕಲಿ ಎಂದು ಭಾವಿಸಿದ್ದರು. ನಂತರ ದಂಪತಿಗಳು ಸಹಾಯಕ್ಕಾಗಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಮತ್ತು ಗೋವಿಂದರಾಜ್ ನಗರ ಶಾಸಕ ಪ್ರಿಯಾ ಕೃಷ್ಣ ಅವರನ್ನು ಸಂಪರ್ಕಿಸಿದರು.

ಶಾಸಕರು ಟ್ಯಾಂಕ್ ನಿರ್ಮಿಸಿದ ಗುತ್ತಿಗೆದಾರ ಲಂಕೇಶ್ ಅವರ ಬಳಿ ಮಾತನಾಡಿ ಆಭರಣ ಹುಡುಕಿ ಕೊಡುವಂತೆ ಹೇಳಿದರು.ನಿರ್ಮಿಸಿದ ಟ್ಯಾಂಕ್ ಬಳಿ ಹುಡುಗರು ಹುಡುಕುವ ಎಲ್ಲಾ ಪ್ರಯತ್ನ ಮಾಡಿದರೂ ಅದು ಪತ್ತೆಯಾಗಲಿಲ್ಲ. ಅಂತಿಮವಾಗಿ, 10,000 ಲೀಟರ್ ನೀರನ್ನು ಹೊಂದಿರುವ ಟ್ಯಾಂಕ್ ಅನ್ನು ಹೊರಹಾಕಲು ಕುಟುಂಬಕ್ಕೆ ಅನುಮತಿ ನೀಡಲಾಯಿತು. ಇತರ ಗಣೇಶ ಮೂರ್ತಿಗಳ ಮಣ್ಣಿನ ಅವಶೇಷಗಳ ನಡುವೆ ಮರುದಿನದವರೆಗೂ ಚಿನ್ನದ ಸರಕ್ಕಾಗಿ ಹುಡುಕಾಟ ಮುಂದುವರೆಯಿತು. ಆಭರಣವು ಕೊನೆಗೂ ಗಣಪತಿಯ ದಯೆಯಿಂದ ಸಿಕ್ಕಿತು ಮತ್ತು ದಂಪತಿಗಳಿಗೆ ಅದನ್ನು ಮರಳಿಸಲಾಯಿತು. ಶೋಧ ಕಾರ್ಯಾಚರಣೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Leave A Reply

Your email address will not be published.