ಅನಂತ ಚತುರ್ದಶಿ ವ್ರತದ ಬಗ್ಗೆ ಎಷ್ಟು ಗೊತ್ತಿದೆ ನಿಮಗೆ ? ಹಿಂದೂಗಳು ಈ ಪುರಾಣ ಇತಿಹಾಸ ತಿಳಿದಿರಬೇಕು!
ಅನಂತ ಚತುರ್ದಶಿ ವ್ರತದ ಹಿಂದೆ ಪೌರಾಣಿಕ ಕಥೆಯಿದೆ. ಹಿಂದೆ ಕೃತಾಯುಗದಲ್ಲಿ ಸುಮಂತ ಎಂಬ ಬ್ರಾಹ್ಮಣನಿದ್ದನಂತೆ. ಆತನ ಹೆಂಡತಿಯ ಹೆಸರು ದೀಕ್ಷಾ ಹಾಗೂ ಮಗಳು ಸುಶೀಲಾ. ಕೆಲ ವರ್ಷಗಳಲ್ಲಿ ದೀಕ್ಷ ತೀರಿಹೋಗುತ್ತಾಳೆ. ಆಗ ಸುಮಂತ ಕರ್ಕಶ ಎಂಬುವಳನ್ನು ಮದುವೆಯಾಗುತ್ತಾನೆ. ಆಕೆ ಸುಶೀಲೆಯನ್ನು ಮಗಳಂತೆ ಪ್ರೀತಿಯಿಂದ ಕಾಣದೆ ಸಾಕಷ್ಟು ಹಿಂಸೆ ಕೊಡುತ್ತಾಳೆ. ಅಷ್ಟು ಹೊತ್ತಿಗೆ ಸುಶೀಲೆ ಕೌಂಡಿನ್ಯ ಎಂಬುವವನನ್ನು ಮದುವೆಯಾಗುತ್ತಾಳೆ. ಚಿಕ್ಕಮ್ಮ ಕೊಡುವ ಕಷ್ಟವನ್ನು ಸಹಿಸಲಾರದೆ ಗಂಡನೊಂದಿಗೆ ಮನೆಯಿಂದ ಹೊರಬರುತ್ತಾಳೆ. ಸತಿ-ಪತಿಯರು ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುಮನೆ ನದಿ ತಟದಲ್ಲಿ ಮಹಿಳೆಯರ ಗುಂಪೊಂದು ಪೂಜೆ ಮಾಡುತ್ತಿರುತ್ತದೆ. ಸುಶೀಲೆ ಅವರಲ್ಲಿ ಅದೇನು ಎಂದು ಕೇಳಿದಾಗ ಪೂಜೆಯ ಬಗ್ಗೆ ವಿವರಿಸುತ್ತಾರೆ. ಆಗ ಸುಶೀಲೆ ತನಗೆ ಮಕ್ಕಳಾಗಲು ಮತ್ತು ತನ್ನ ಗಂಡ ಮಾಡುತ್ತಿರುವ ವೃತ್ತಿಯಲ್ಲಿ ಯಶಸ್ಸು ಸಿಗಲು ಅನಂತ ವ್ರತವನ್ನು ಮಾಡಬೇಕೆಂಬ ಆಸೆಯಾಗಿ ವ್ರತಾಚರಣೆಯಲ್ಲಿ ತೊಡಗುತ್ತಾಳೆ.
ಅವರ ಸಂಪತ್ತು ವೃದ್ಧಿಸಿ ಇಷ್ಟಾರ್ಥ ನೆರವೇರುತ್ತದೆ. ಆದರೆ ಸುಶೀಲೆಯ ಗಂಡ ಕೌಂಡಿನ್ಯನಿಗೆ ವ್ರತದ ಮೇಲೆ ನಂಬಿಕೆ ಬರುವುದಿಲ್ಲ. ಸುಶೀಲೆ ವ್ರತದ ಅಂಗವಾಗಿ ತನ್ನ ಎಡಗೈ ತೋಳಿಗೆ ಕಟ್ಟಿದ್ದ ದಾರವನ್ನು ಕಿತ್ತು ಬೆಂಕಿಗೆ ಎಸೆಯುತ್ತಾನೆ. ಈ ಘಟನೆಯ ನಂತರ ಅವರ ಸಂಪತ್ತು ನಿಧಾನವಾಗಿ ನಶಿಸುತ್ತಾ ಹೋಗುತ್ತದೆ. ಬಡತನ ಆ ದಂಪತಿಯನ್ನು ಆವರಿಸುತ್ತದೆ. ಹಲವು ಕಷ್ಟ-ತೊಂದರೆಗಳನ್ನು ಅನುಭವಿಸಿದ ನಂತರ ಕೌಂಡಿನ್ಯನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅನಂತ ಪದ್ಮನಾಭ ದೇವರ ಶಾಪವೆಂದು ತಿಳಿಯುತ್ತದೆ. ದೇವರ ದರ್ಶನಕ್ಕೆಂದು ಕಾಡಿಗೆ ಹೋಗುತ್ತಾನೆ. ಅಲ್ಲಿ ಮಾವಿನಮರದಲ್ಲಿ ಹಣ್ಣು ಬಿಟ್ಟಿರುತ್ತದೆ. ಆದರೆ ಹಣ್ಣನ್ನು ತಿನ್ನಲು ಸಾಧ್ಯವಾಗುವುದಿಲ್ಲ. ದಟ್ಟ ಹುಲ್ಲುಗಾವಲಿನಲ್ಲಿ ಹಸು,ಕರು, ಎಮ್ಮೆ, ಕತ್ತೆ ಇವೆಲ್ಲಾ ಸಿಗುತ್ತವೆ. ಎಲ್ಲದರ ಬಳಿಯೂ ಅನಂತ ಪದ್ಮನಾಭನ ಬಗ್ಗೆ ತಿಳಿದಿದೆಯೇ ಎಂದು ಕೇಳುತ್ತಾನೆ. ಇಲ್ಲ ಎಂಬ ಉತ್ತರ ಬರುತ್ತದೆ. ಕೌಂಡಿನ್ಯನಿಗೆ ಜೀವನದಲ್ಲಿ ಹತಾಶೆ, ನಿರಾಶೆ ಉಂಟಾಗಿ ಸಾಯಲು ಹೊರಡುತ್ತಾನೆ
ಆಗ ಅನಂತ ಪದ್ಮನಾಭ ದೇವರು ಬ್ರಾಹ್ಮಣನ ರೂಪದಲ್ಲಿ ಪ್ರತ್ಯಕ್ಷರಾಗಿ ಈ ಹಿಂದೆ ಸಿಕ್ಕಿದ ಎಲ್ಲಾ ಗಿಡ, ಮರ, ಪ್ರಾಣಿಗಳು ತಾನೇ ಆಗಿದ್ದೆ ಎಂದು ವಿವರಿಸಿ ವರವನ್ನು ಕೊಡುತ್ತಾರೆ. ಕೌಂಡಿನ್ಯನಿಗೆ ಮತ್ತೆ ಸಂಪತ್ತು ಒಲಿದು ಬರುತ್ತದೆ. ಗಂಡ-ಹೆಂಡಿರು ಮುಂದೆ 14 ವರ್ಷಗಳ ಕಾಲ ಪ್ರತಿವರ್ಷ ಅನಂತ ಪದ್ಮನಾಭ ವ್ರತ ಮಾಡುತ್ತಾರೆ. ಹೀಗೆ ಅನಂತ ಪದ್ಮನಾಭ ವ್ರತ ಆಚರಣೆಗೆ ಬಂದಿತು ಎಂಬ ಕಥೆ. ಅನಂತ ಚತುರ್ದಶಿಯನ್ನು ನಮ್ಮ ರಾಜ್ಯವೂ ಒಳಗೊಂಡಂತೆ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಈ ವ್ರತದ ಆಚರಣೆ ಎಲ್ಲ ಕಡೆಯಲ್ಲಿಯೂ ಕಾಣಿಸುವುದಿಲ್ಲ. ಅಲ್ಲಲ್ಲಿ ವ್ರತವನ್ನು ಮಾಡುವವರು ಇರುತ್ತಾರಷ್ಟೆ .
ಸರ್ವಜನ ಸುಖಿನೋಭವತು ಕೃಷ್ಣಾರ್ಪಣಮಸ್ತು
(ಸಂಗ್ರಹ)*ಸನಾತನ ರಾಷ್ಟ್ರಭಕ್ತರು🚩