ಗಣಪತಿ ಬಪ್ಪ ಮೋರ‍್ಯಾ ಹಾಗೆಂದರೇನು? ಈ ಮರಾಠಿ ಉದ್ಘೋಷಕ್ಕೂ ಕರ್ನಾಟಕಕ್ಕೂ ಇದೆ ನಂಟು! ಯಾರಿಗೂ ಗೊತ್ತಿರದ ಈ ವಿಷಯ ಇಂದು ನೀವು ಅರಿಯಲೇಬೇಕು!
ಗಣೇಶ ಚತುರ್ಥಿ ಆಚರಣೆ ಸಂಭ್ರಮ ಸಡಗರದಲ್ಲಿ ನಡೆಯುತ್ತಿದೆ. ಕೆಲವು ಕಡೆ ಈಗಾಗಲೇ ಗಣಪನ ವಿಸರ್ಜನೆ ಆಗಿದ್ದು ಇನ್ನು ಕೆಲವೆಡೆ ವಿಸರ್ಜನೆ ಆಗಬೇಕಷ್ಟೆ. ಗಣಪನ ಪ್ರತಿಮೆಯನ್ನು ಇತ್ತು ಭಕ್ತಿ ಶ್ರದ್ಧಾಪೂರ್ವಕವಾಗಿ ಪೂಜೆ ಮಾಡಿ ನಾವು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಗಣಪತಿ ಬಪ್ಪ ಮೋರ‍್ಯಾ ಮಂಗಳ ಮೂರ್ತಿ ಮೋರ‍್ಯಾ ಎಂಬ ಉದ್ಘೋಷ ಹಾಕುತ್ತೇವೆ. ಮೊದಲು ಇದು ಮಹಾರಾಷ್ಟ್ರದಲ್ಲಿ ಆರಂಭ ಗೊಂಡು ಕಾಲಾಂತರದಲ್ಲಿ ಈ ಒಂದು ಉದ್ಘೋಷ ಎಲ್ಲಾ ಕಡೆ ಯಾವುದೇ ಭಾಷೆ ಬೇಧ ಇಲ್ಲದೆ ಹಾಕಲು ಶುರುವಾಯಿತು.
ಆದರೆ ಈ ಒಂದು ಉದ್ಘೋಷದ ಅರ್ಥ ಏನು ? ಎಲ್ಲರೂ ಈ ಉದ್ಘೋಷ ಕೂಗುತ್ತಾರೆ ಆದರೆ ಇದರ ಅರ್ಥ ಏನೆಂದು ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ. “ಗಣಪತಿ ಬಪ್ಪ ಮೋರ‍್ಯಾ” ಗಣ ಎಂದರೆ ಗುಂಪು ಎಂದರ್ಥ. ಶಿವನ ಕೈಲಾಸದಲ್ಲಿ ಹಲವಾರು ಗಣಗಳು ಇವೆ. ಪತಿ ಎಂದರೆ ಮುಖ್ಯಸ್ಥ ನಾಯಕ ಎಂಬ ಅರ್ಥ ಇದೆ. ಹಾಗೆ ಪತಿ ಎಂದರೆ ಗಂಡ ಎಂಬ ಅರ್ಥ ಕೂಡ ಇದೆ. ಆದರೆ ಗುಂಪಿನ ವಿಚಾರ ಬಂದಾಗ ಇಲ್ಲಿ ನಾಯಕ ಎಂದೇ ಅರ್ಥ ಬರುತ್ತದೆ. ಹೀಗಿರುವಾಗ “ಗಣಪತಿ” ಎಂದರೆ ಗಣಗಳಿಗೆ ಒಡೆಯ ಅಥವಾ ನಾಯಕ ಎಂದರ್ಥ. ಬಪ್ಪ ಎಂದರೆ ಮರಾಠಿ ಯಲ್ಲಿ ತಂದೆ ಎಂದು ಅರ್ಥ ಇದೆ. ಗಣಪತಿ ಬಪ್ಪ ಅಥವಾ ಇದನ್ನು ಗಣಪತಿಯಪ್ಪ ಅಂತ ಕೂಡ ಹೇಳಬಹುದು.
ಇನ್ನು “ಮೋರ‍್ಯಾ” ಪದಕ್ಕೆ ಬರುವುದಾದರೆ ಇದರ ಹಿಂದೆ ಒಂದು ಕಥೆಯೇ ಇದೆ. ಇದು ಒಬ್ಬ ವ್ಯಕ್ತಿಯ ಹೆಸರು ಹೌದು ಅಚ್ಚರಿ ಎನಿಸಿದರೂ ಸತ್ಯ ವಿಷಯ ಇದು.ಅವರ ಹೆಸರು ಮೋರ‍್ಯಾ ಗೋಸಾವಿ ಅಥವಾ ಮೊರಿಯಾ ಗೋಸಾವಿ ಅಥವಾ ಮೊರೋಬ ಎಂದು ಕರೆಯಲ್ಪಡುವ ಇವರು ಮೂಲತಃ ಕರ್ನಾಟಕದವರು ಆದರೆ ಮಹಾರಾಷ್ಟ್ರದಲ್ಲಿ ಇದ್ದರು. ಇವರು ಗಣಪತಿಯೇ ಶ್ರೇಷ್ಠ ಎಂದು ನಂಬಿರುವ ಓರ್ವ ಸಂತ. ಇವರು ಗಣಪತಿ ಪಂಥದ ಪ್ರತಿಪಾದಕರು. ಇವರು 13-17 ನೆಯ ಶತಮಾನದ ಕಾಲಘಟ್ಟದಲ್ಲಿ ಮಹಾರಾಷ್ಟ್ರ ದಲ್ಲಿ ನೆಲೆಸಿದ್ದರು.ಮಹಾರಾಷ್ಟ್ರದ ಮೊರ್ಗಾವ್‌ನ ಹೆಸರಾಂತ ಮಹಾಗಣಪತಿ ದೇಗುಲದ ಪರಮ ಭಕ್ತರಾಗಿದ್ದ ಇವರನ್ನು ಒಮ್ಮೆ ಅಲ್ಲಿ ಪ್ರಾರ್ಥನೆ ಮಾಡಲು ಹೋದಾಗ ದೇವಸ್ಥಾನದ ಒಳಗೆ ಬಿಡದೆ ಅವಮಾನ ಮಾಡಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಇವರ ಕನಸಲ್ಲಿ ಗಣಪತಿ ಬಂದು ಹತ್ತಿರದ ‘ಚಿಂಚ್ ವಾಡ್’ ಗ್ರಾಮಕ್ಕೆ ಹೋಗಿ ಅಲ್ಲಿ ನನ್ನ ಪ್ರತಿಷ್ಟಾಪನೆ ಮಾಡಿ ಪೂಜೆ ನೆರವೇರಿಸುವ ಅಪ್ಪಣೆ ನೀಡಿದರು . ಅದೇ ಪ್ರಕಾರವಾಗಿ ಮೋರ‍್ಯಾರು ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದರು ಅವರ ಮಗ ಕೂಡ ಇವರಿಗೆ ಪೂಜೆ ನೆರವೇರಿಸಲು ಸಹಕಾರ ಮಾಡುತ್ತಿದ್ದ. ಮುಂದೆ ಒಂದು ದಿನ ಇವರು ಇಲ್ಲಿಯೇ ಸಮಾಧಿ ಕೂಡ ಆದರು.
ಗಣಪತಿಯ ಪರಮ ಭಕ್ತರಾದ ಇವರಿಗೆ ಗಣಪತಿ ಕನಸಲ್ಲಿ ಬಂದು ನಿನ್ನಿಂದ ಪ್ರಸನ್ನ ನಾಗಿದ್ದೇನೆ. ನಿನಗೆ ಏನು ಬೇಕು ಕೇಳು ಎಂದು ಕೇಳಿದಾಗ ” ನನಗೆ ಯಾವುದೇ ಆಸ್ತಿ ಪಾಸ್ತಿ ಧನ ಕನಕ ಬೇಡ, ಬದಲಾಗಿ ಪರಮ ಭಕ್ತ ನಾದ ನನ್ನನ್ನು ನಿನ್ನ ಜೊತೆ ಜನರು ಸ್ಮರಿಸಕೊಳ್ಳುವಂತೆ ವರ ಕೊಡ ಎಂದು ಪ್ರಾರ್ಥನೆ ಮಾಡುತ್ತಾರೆ. ಅದೇ ಪ್ರಕಾರವಾಗಿ ಗಣಪತಿ ವರದಂತೆ ಗಣಪತಿಯ ಉದ್ಘೋಷ ಜೊತೆಗೆ ಮೋರ‍್ಯಾರ ಹೆಸರು ಸೇರಿಕೊಂಡಿತು. ಗಣಪತಿ ಬಪ್ಪಾ ಮೋರ‍್ಯಾಮಂಗಳ ಮೂರ್ತಿ ಮೋರ‍್ಯಾ.