Mahakumbh 2025: 99% ಭಾರತೀಯರಿಗೆ ಕುಂಭ ಮೇಳ ಎಂದರೇನು ಎನ್ನುವುದೇ ಗೊತ್ತಿಲ್ಲ. ನಮ್ಮ ಇತಿಹಾಸದ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕುಂಭಮೇಳವು (Kumbh Mela) ವಿಶ್ವದ ಅತ್ಯಂದ ದೊಡ್ಡ ಸಾಂಸ್ಕೃತಿಕ ಹಾಗು ಧಾರ್ಮಿಕ ಜಾತ್ರೆಯಾಗಿದೆ. ಈ ಸಮಯದಲ್ಲಿ ವಿಶ್ವದ ಅನೇಕ ಜನರು ಭಾರತದ ಈ ಒಂದು ಸ್ಥಳದಲ್ಲಿ ಸೇರುತ್ತಾರೆ. ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ, ಸಾದು ಸಂತರ ಪ್ರವಚನಗಳನ್ನು ಕೇಳುತ್ತಾರೆ. ಆದ್ಯಾತ್ಮಿಕ ಜ್ಞಾನಗಳನ್ನ ಪಡೆಯುತ್ತಾರೆ, ಧರ್ಮದ ಮಾರ್ಗದಲ್ಲಿ ಹೇಗೆ ಸಾಗುವುದು ಎನ್ನುವ ಮಾರ್ಗದರ್ಶವನ್ನು ಪಡೆಯುತ್ತಾರೆ. ಆದರೆ ಇಂದಿನ ವಿಪರ್ಯಾಸ ಏನೆಂದರೆ ದೇಶದ 99% ಜನರಿಗೆ ಈ ಕುಂಭ ಮೇಳ ಎಂದರೇನು ಅಂತಾನೆ ಗೊತ್ತಿಲ್ಲ. ಮೊದಲನೆಯದಾಗಿ ಕುಂಭ ಎಂದರೇನು? ಕುಂಭ ಅಂದರೆ ಮಡಕೆ ಅಥವಾ ಹೂಜಿ ಎಂದರ್ಥ. ನೀವು ಈ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೀರಾ ಎಂದರೆ ಈ ಲೇಖನ ನಿಮಗೆ.
ಕುಂಭ ಮೇಳ ಐತಿಹಾಸಿಕ ಹಿನ್ನೆಲೆಯೇನು?
ಒಮ್ಮೆ ದೇವೇಂದ್ರ ದೇವತೆಗಳ ರಾಜ, ಆನೆಯ ಮೇಲೆ ಸವಾರಿ ಮಾಡುವಾಗ ದೂರ್ವಾಸ ಋಷಿಯು ಅವನಿಗೆ ವಿಶೇಷ ಮಾಲೆಯನ್ನು ಅರ್ಪಿಸಿದರು. ದೇಂದ್ರನು ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿಗೆ ಹಾಕಿದನು. ಆ ಮಾಲೆಯ ಪರಿಮಳ ಆನೆಗೆ ಸಹಿಸಲಾಗಲಿಲ್ಲ ಸಿಟ್ಟಿಗೆದ್ದ ಆನೆ ಹಾರವನ್ನು ನೆಲದ ಮೇಲೆ ಎಸೆಯಿತು. ಋಷಿಯನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಇಂದ್ರ ಈ ತರಹ ಮಾಡಿದ್ದು ಋಷಿಗೆ ಕೋಪವನ್ನುಂಟುಮಾಡಿತು. ದೂರ್ವಾಸ ಮುನಿಯು ಇಂದ್ರ ಹಾಗು ಎಲ್ಲಾ ದೇವತೆಗಳ ಎಲ್ಲಾ ಶಕ್ತಿ, ಶಕ್ತಿ ಮತ್ತು ಅದೃಷ್ಟವನ್ನು ಕಳೆದುಕೊಳ್ಳುವಂತೆ ಶಪಿಸಿದನು. ಈ ಘಟನೆಯ ನಂತರ, ದೇವತೆಗಳು ಅಸುರರಿಗೆ ನಡೆದ ಯುದ್ಧದಲ್ಲಿ ಎಲ್ಲವನ್ನು ಕಳೆದುಕೊಂಡರು ಮತ್ತು ಅಸುರರು ಸ್ವರ್ಗದದ ನಿಯಂತ್ರಣ ಪಡೆದರು.
ದೇವತೆಗಳು ಮಹಾವಿಷ್ಣುವಿನ ಸಹಾಯವನ್ನು ಕೋರಿದರು, ವಿಷ್ಣು ಶಕ್ತಿಯನ್ನು ಮರಳಿ ಪಡೆಯುವ ಏಕೈಕ ಮಾರ್ಗವೆಂದರೆ ಸಮುದ್ರದ ಕೆಳಗೆ ಇರುವ ಪವಿತ್ರ ಅಮೃತವನ್ನು ಸೇವಿಸುವ ಮೂಲಕ ಎಂದು ತಿಳಿಸಿದರು. ಸಮುದ್ರ ಮಂಥನದಿಂದ ಮಾತ್ರ ಪವಿತ್ರವಾದ ಅಮೃತವನ್ನು ಹೊರತರಲು ಸಾಧ್ಯ. ದೇವತೆಗಳಿಗೆ ಯಾವುದೇ ಶಕ್ತಿಯಿಲ್ಲದ ಕಾರಣ ಸಮುದ್ರ ಮಂತನಕ್ಕಾಗಿ ಸಾಗರವನ್ನು ಜಂಟಿಯಾಗಿ ಮಂಥನ ಮಾಡಲು ಅಸುರರನ್ನು ಸಹಾಯ ಕೋರಿದರು.

ಮಂಥನದಲ್ಲಿ ಮಂದಾರ ಪರ್ವತ ಕಡಗೋಲಾದರೆ, ಶೇಷ ನಾಗ ಕಡೆಯುವ ಹಗ್ಗವಾಗುತ್ತಾನೆ. ವಿಷ್ಣು ಕೂರ್ಮಾವತಾರ ತಾಳಿ ಮಂಥನ ನಡೆಸುವ ಪರ್ವತಕ್ಕೆ ಆಸರೆ ಆಗುತ್ತಾನೆ. ಈ ಮಂಥನ ನಡೆಯುವಾಗ ಕಾರ್ಕೋಟಕ ವಿಷ ಹೊರ ಬರುತ್ತದೆ. ಇದನ್ನು ಶಿವ ಸೇವಿಸಿ ನೀಲಕಂಠನಾದ. ನಂತರ ಬಂದ ಅಮೃತಕ್ಕಾಗಿ ಕಿತ್ತಾಟವೇ ಶುರುವಾಯಿತು. ಮಹಾವಿಷ್ಣು ಮೋಹಿನಿ ರೂಪ ತಾಳಿ ದೇವತೆಗಳಿಗೆ ಅಮೃತ ಕುಡಿಸುವಲ್ಲಿ ಯಶಸ್ವಿಯಾದರು. ನಂತರ ಕುಂಭ ದಲ್ಲಿ ಅಂದರೆ ಮಡಕೆಯಲ್ಲಿ ಉಳಿದ ಚೂರು ಅಮೃತವನ್ನು ವಿಷ್ಣು ಗರುಡನಿಗೆ ಕೊಂಡೋಗುವಂತೆ ನೀಡುತ್ತಾನೆ. ಆ ಸಮಯದಲ್ಲಿ ಅಮೃತ ಬಿದ್ದ ಜಾಗಗಳೇ ಹಿಂದೂಗಳ ಪುಣ್ಯಭೂಮಿ ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಹಾಗು ನಾಸಿಕ್. ಇದೆ ಕಾರಣಕ್ಕೆ ಈ ಪವಿತ್ರ ಸ್ಥಳಗಳಲ್ಲಿ ಇಂದಿಗೂ ಕುಂಭ ಮೇಳ ನಡೆಯುತ್ತದೆ. ಗಂಗಾ, ಯಮುನಾ ಹಾಗು ಸರಸ್ವತಿ ನದಿಯ ತಟದಲ್ಲಿ ಅಮೃತ ಬಿದ್ದ ಕಾರಣದಿಂದ ಈ ಸಮಯದಲ್ಲಿ ನಡೆಯುವ ಪುಣ್ಯ ಸ್ನಾನ ಮಹತ್ವ ಪಡೆದುಕೊಂಡಿದೆ.
ಅಮೃತಕ್ಕಾಗಿ ದೇವಾ ದಾನವರ ನಡುವೆ 12 ದಿನಗಳವರೆಗೆ ಯುದ್ಧ ನಡೆದಿದ್ದಿತ್ತು. ಅದೇ ಕಾರಣಕ್ಕೆ ಇಂದು 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ. ಹಾಗೇನೇ ಗುರು ಗ್ರಹವು ಪ್ರತಿ ರಾಶಿಯಲ್ಲಿ ಚಾಲನೆ ಮಾಡಲು 12 ವರ್ಷ ಬೇಕಾಗುತ್ತದೆ. ಪೂರ್ಣ ಪರಿಕ್ರಮ ನಡೆದ ಸಂಧರ್ಭದಲ್ಲಿ ಕುಂಭ ಮೇಳ ನಡೆಯುತ್ತದೆ. ಕುಂಭ ಮೇಳದಲ್ಲಿ 3 ವಿಧದ ಕುಂಭವಿದೆ. ಅವುಗಳನ್ನು ಬೇರೆ ಬೇರೆ ವರ್ಷಗಳಲ್ಲಿ ಆಚರಣೆ ಮಾಡಲಾಗುತ್ತದೆ.
ಹರಿದ್ವಾರ, ನಾಸಿಕ್ ಹಾಗು ಪ್ರಯಾಗ್ರಾಜ್ ನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಕುಂಭ ಎಂದು ಕರೆಯುತ್ತಾರೆ. ಹರಿದ್ವಾರ ಹಾಗು ಪ್ರಯಾಗ್ರಾಜ್ ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ಕುಂಭ ಉತ್ಸವ ನಡೆಯುತ್ತದೆ ಅದನ್ನು ಅರ್ಧ ಕುಂಭ ಎಂದು ಕರೆಯುತ್ತಾರೆ. ಪ್ರಯಾಗ್ರಾಜ್ ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಉತ್ಸವವನ್ನು ಪೂರ್ಣ ಕುಂಭ ಮೇಳ ಎಂದು ಕರೆಯುತ್ತಾರೆ. ಹಾಗೇನೇ 144 ವರ್ಷಗಳಿಗೊಮ್ಮೆ ಪ್ರಯಾಗ್ರಾಜ್ ನಲ್ಲಿ ನಡೆಯುವ ಕುಂಭ ಮೇಳವನ್ನು ಮಹಾಕುಂಭ ಮೇಳ (Mahakumbh Mela 2025) ಎಂದು ಕರೆಯುತ್ತಾರೆ.