Repo rate: ರೆಪೋ ರೇಟ್ ಎಂದರೇನು? ಇದು ನಿಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ?
ಹಣದ ಅತ್ಯಾವಶ್ಯಕತೆ ಇರುವಾಗ ಸಿಗುವ ಸಾಲ (Personal Loan) ನಮಗೆ ತಕ್ಕ ಮಟ್ಟಿಗೆ ಹಾಗು ಸ್ವಲ್ಪ ಸಮಯಕ್ಕೆ ನೆಮ್ಮದಿ ನೀಡುತ್ತದೆ. ಆದರೆ ನಿಮಗೆ ಯಾವಾಗಲಾದರೂ ಈ ಪರ್ಸನಲ್ ಲೋನ್ ಬಡ್ಡಿದರ ಅವಾಗವಾಗ ಬದಲಾಗುತ್ತಿರುವುದನ್ನು ಗಮನಿಸಿದ್ದೀರಾ? ಈ ಬಡ್ಡಿದರ ಏರಿಳಿತಗಳ (Interest Fluctuation) ಹಿಂದಿನ ಒಂದು ದೊಡ್ಡ ಕಾರಣ ರೆಪೋ ರೇಟ್ (Repo rate). ಹಾಗಾದರೆ ಏನಿದು ರೆಪೋ ರೇಟ್? ಇದು ಸಾಲದ ಬಡ್ಡಿಗಳ ಮೇಲೆ ಹೇಗೆ ಪರಿಣಾಮ ಬೀಳುತ್ತದೆ? ಇದು ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಹೇಗೆ ಪರಿಣಾಮ ಬೀಳುತ್ತದೆ?
ರೆಪೋ ರೇಟ್ ಅಂದರೇನು?
ರೆಪೋ ರೇಟ್ ಅಂದರೆ “ರೆಪೆರ್ಚಸ್ ರೇಟ್” ಎಂದರ್ಥ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಭಾರತದ ಎಲ್ಲ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಬಡ್ಡಿದರವಾಗಿದೆ. ಇನ್ನು ಸುಲಭದಲ್ಲಿ ಹೇಳಬೇಕೆಂದರೆ ವಾಣಿಜ್ಯ ಬ್ಯಾಂಕ್ ಗಳು ಆರ್ಬಿಐ ಇಂದ ಪಡೆಯುವ ಸಾಲದ ಮೇಲಿನ ಖರ್ಚು.
ಈ ರೆಪೋ ರೇಟ್ (Repo rate) ಸಾಲದ ಬಡ್ಡಿದರ ಗಳ ಏರಿಳಿತಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆರ್ಬಿಐ ರೆಪೋ ರೇಟ್ ಹೆಚ್ಚಿಸಿದಾಗ ಬ್ಯಾಂಕ್ ಗಳು ಪಡೆಯುವ ಸಾಲದ ಮೇಲೆ ಹೆಚ್ಚಿನ ಹೊರೆ ಹಾಗು ಖರ್ಚು ಬೀಳುತ್ತದೆ. ಇದನ್ನು ಕಡಿಮೆ ಮಾಡಲು ಬ್ಯಾಂಕ್ಗಳು ತಮ್ಮ ಮೇಲಿನ ಹೊರೆಯನ್ನ ಜನ ಸಾಮಾನ್ಯರ ಮೇಲೆ ಸಾಲದ ಮೇಲಿನ ಬಡ್ಡಿ ದರ ಜಾಸ್ತಿ ಮಾಡುವ ಮೂಲಕ ಹಾಕುತ್ತದೆ.
ಹಾಗೇನೇ ಆರ್ಬಿಐ ರೆಪೋ ರೇಟ್ ಕಡಿಮೆ ಮಾಡುವಾಗ ಬ್ಯಾಂಕ್ ಗಳ ಮೇಲಿನ ಬಾರೋವಿಂಗ್ ಕಾಸ್ಟ್ ಅಂದರೆ ಆರ್ಬಿಐ ಇಂದ ಸಾಲ ಪಡೆಯುವ ಖರ್ಚು ಕಡಿಮೆ ಆಗುತ್ತದೆ. ಅವಾಗ ವಾಣಿಜ್ಯ ಬ್ಯಾಂಕ್ ಗಳು ಕೂಡ ಜನಸಾಮಾನ್ಯರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡುತ್ತದೆ. ಜನಸಾಮಾನ್ಯರು ಪರ್ಸನಲ್ ಲೋನ್ ಗಳನ್ನೂ ಅತಿ ಕಡಿಮೆ ಬಡ್ಡಿದರದಲ್ಲಿ ಪಡೆಯಬಹುದು.
ಆದರೆ ಬ್ಯಾಂಕ್ ಗಳು ರೆಪೋ ರೇಟ್ ಕಡಿಮೆ ಆದ ತಕ್ಷಣ ಬಡ್ಡಿ ದರಗಳನ್ನು ಕಡಿಮೆ ಮಾಡಲೇಬೇಕೆಂದೇನಿಲ್ಲ. ಬೇರೆ ಬ್ಯಾಂಕ್ ಗಳ ಜೊತೆ ಪೈಪೋಟಿ ಹಾಗು ಬ್ಯಾಂಕ್ ಗಳ ಲಾಭ ನಷ್ಟ ನೋಡಿ ಬಡ್ಡಿ ದರಗಳನ್ನು ತಗ್ಗಿಸುವ ಕೆಲಸ ಮಾಡುತ್ತದೆ.
ರೆಪೋ ರೇಟ್ ಹೆಚ್ಚಳ vs ರೆಪೋ ರೇಟ್ ಕಡಿತ.
ಈ ರೆಪೋ ರೇಟ್ ಹೆಚ್ಚಳ ಹಾಗು ಕಡಿತಗಳ ಬಗ್ಗೆ ನಿಮಗೆ ಗೊತ್ತಿದ್ದರೆ ನೀವು ಯಾವ ಸಮಯದಲ್ಲಿ ಸಾಲ ಪಡೆಯಬಹುದು ಎನ್ನುವುದನ್ನು ತಿಳಿಯುತ್ತೀರಿ.
ರೆಪೋ ರೇಟ್ ಹೆಚ್ಚಳ:
1. ನೀವು ಹೊಸ ಸಾಲದ ಮೇಲೆ ಹೆಚ್ಚು ಬಡ್ಡಿ ಕಟ್ಟಬೇಕಾಗುತ್ತದೆ.
2. ನಿಮ್ಮ ಬಳಿ ಫ್ಲೋಟಿಂಗ್ ಇಂಟರೆಸ್ಟ್ ಇದ್ದರೆ ನಿಮ್ಮ ತಿಂಗಳ EMI ಹೆಚ್ಚಾಗುತ್ತದೆ.
3. ಹೆಚ್ಚಿನ ಬಡ್ಡಿದರ ಹೊಸ ಸಾಲ ಪಡೆಯುವವರಲ್ಲಿ ನಿರಾಸಕ್ತಿ ಉಂಟು ಮಾಡುತ್ತದೆ. ಇದು ದೇಶದ ಆರ್ಥಿಕತೆ ಕುಗ್ಗಿಸಬಹುದು.
ರೆಪೋ ರೇಟ್ ಕಡಿತ:
1. ಆರ್ಬಿಐ ರೆಪೋ ರೇಟ್ ಕಡಿತಗೊಳಿಸಿದರೆ ಸಾಲ ಕೈಗೆಟಕುವ ಬಡ್ಡಿ ದರದಲ್ಲಿ ಸಿಗುತ್ತದೆ.
2. ಸಾಲದ ಮೇಲೆ ಫ್ಲೋಟಿಂಗ್ ಇಂಟರೆಸ್ಟ್ ಇದ್ದರೆ ನಿಮ್ಮ ತಿಂಗಳ EMI ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
3. ಕಡಿಮೆ ಬಡ್ಡಿದರ ಹೊಸ ಸಾಲ ಪಡೆಯುವವರನ್ನು ಆಕರ್ಷಿಸುತ್ತದೆ. ಹಾಗೇನೇ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡುತ್ತದೆ.
ಏನಿದು ಫಿಕ್ಸೆಡ್ ಹಾಗು ಫ್ಲೋಟಿಂಗ್ ಬಡ್ಡಿದರ?
ನೀವು ಸಾಲ ಪಡೆಯುವಾಗ ಫಿಕ್ಸೆಡ್ (Fixed Interest rate) ಅಂದರೆ ಸ್ಥಿರ ಬಡ್ಡಿ ದರ ಅಥವಾ ಫ್ಲೋಟಿಂಗ್ ಬಡ್ಡಿ ದರ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಸ್ಥಿರ ಬಡ್ಡಿ ದರದಲ್ಲಿ ನೀವು ಪಡೆಯುವ ಸಾಲದ ಮೇಲೆ ಒಂದು ಫಿಕ್ಸೆಡ್ ಬಡ್ಡಿ ದರ ನೀಡಲಾಗುತ್ತದೆ. ರೆಪೋ ರೇಟ್ ಹೆಚ್ಚು ಅಥವಾ ಕಡಿಮೆ ಆದರೆ ನಿಮ್ಮ ತಿಂಗಳ ಸಾಲದ ಮರು ಪಾವತಿಯಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಫ್ಲೋಟಿಂಗ್ ಬಡ್ಡಿ ದರ (Floating Interest Rate) ಮಾರುಕಟ್ಟೆ ಮೇಲೇ ನಿರ್ಧರಿತವಾಗಿರುತ್ತದೆ. ಹಾಗೇನೇ ರೆಪೋ ರೇಟ್ ಬದಲಾವಣೆ ಮೇಲೆ ಹೆಚ್ಚಾಗಿ ಬದಲಾಗುತ್ತದೆ. ಒಂದು ವೇಳೆ ರೆಪೋ ರೇಟ್ ಹೆಚ್ಚಾದರೆ ನಿಮ್ಮ ಸಾಲದ ಮೇಲಿನ ಬಡ್ಡಿ ದರ ಹಾಗು ತಿಂಗಳ ಸಾಲದ ಮರುಪಾವತಿ ಹೆಚ್ಚಾಗುತ್ತದೆ ಅಂದರೆ EMI ಹೆಚ್ಚಾಗುತ್ತದೆ. ಹಾಗೇನೇ ರೆಪೋ ರೇಟ್ ಕಡಿಮೆ ಆದರೆ ನಿಮ್ಮ ಸಾಲದ ಮೇಲಿನ ಬಡ್ಡಿ ಕಡಿಮೆ ಆಗುತ್ತದೆ ಹಾಗೇನೇ ನಿಮ್ಮ ತಿಂಗಳ ಸಾಲದ ಮರುಪಾವತಿ ಕೂಡ ಕಡಿಮೆ ಆಗುತ್ತದೆ. ಈ ರೆಪೋ ರೇಟ್ ಬದಲಾವಣೆ ನಿಮ್ಮ ತಿಂಗಳ EMI ಮೇಲೆ ಪರಿಣಾಮ ಬೀಳುತ್ತದೆ ಹೊರತು ನಿಮ್ಮ ಸಾಲದ ಅವಧಿಯಲ್ಲಿ ಯಾವುದೇ ಹೆಚ್ಚು ಕಡಿಮೆ ಆಗುವುದಿಲ್ಲ.