ಅನ್ನಧಾನದ ಮಹತ್ವವೇನು? ಯಾಕೆ ಅನ್ನದಾನ ಶ್ರೇಷ್ಠ ಧಾನ ಎನ್ನುತ್ತಾರೆ? ಇದನ್ನು ಪೂರ್ತಿ ಓದಿ.
ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ ಬಂದ. ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ ಅವರು ದೊಡ್ಡ ಶ್ರೀಮಂತರಾಗಬೇಕಿತ್ತು. ಆಗಲಿಲ್ಲ. ತಾಯಿ ಹೀಗೇಕೆ ಮಾಡುತ್ತಿರಬಹುದೆಂದು ಮಗನಿಗೆ ಯೋಚನೆಯಾಯಿತು. ಒಂದು ದಿನ ಮಗ,ತಾಯಿ, ಇದೇಕೆ ಹೀಗೆ ಅನ್ನದಾನ ಮಾಡುತ್ತೀ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ, ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ವ? ಹೇಳು’ ಎಂದ. ಅದಕ್ಕೆ ತಾಯಿ,‘ಮಗೂ, ದಾನಗಳಲ್ಲಿ ಅನ್ನದಾನವೇ ಹೆಚ್ಚಿನದು. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ. ಆದರೆ ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು’ ಎಂದಳು. ‘ಆ ಪುಣ್ಯ ಯಾವುದು?’ ಪ್ರಶ್ನಿಸಿದ ಮಗ. ‘ಅದನ್ನು ಹೇಳುವುದು ನಮ್ಮಂಥ ನರಮನುಷ್ಯರಿಂದ ಹೇಗಾದೀತು? ಅದು ಶಿವನಿಗೆ ಗೊತ್ತು. ಅವನನ್ನೇ ಹೋಗಿ ಕೇಳು’ ಎಂದು ತಾಯಿ ಹೇಳಿದಳು. ಸರಿ, ಅದರಂತೆ ಮಗ ತಾಯಿಯ ಅಪ್ಪಣೆ ಪಡೆದುಕೊಂಡು ಶಿವನ ಬಳಿಗೆ ಹೊರಟ.
ಹೋಗುತ್ತ ಹೋಗುತ್ತ ದೊಡ್ಡದೊಂದು ಅಡವಿ ಬಂತು. ಅಲ್ಲಿ ಗಿಡಮರ ದಟ್ಟವಾಗಿ ಬೆಳೆದಿದ್ದವು. ಇವನು ಬೆಟ್ಟ ಹತ್ತಿ ಇಳಿಯುವಷ್ಟರಲ್ಲಿ, ಸಂಜೆಯಾಯಿತು. ಮುಂದೆ ಏನು ಮಾಡಬೇಕೆಂದು ಹೊಳೆಯದಾಯಿತು. ಆಗ ಅಲ್ಲಿಗೊಬ್ಬ ಬೇಡ ಬಂದ. ಈ ಹುಡುಗನನ್ನು ನೋಡಿ ಅವನಿಗೆ ಕರುಣೆ ಬಂತು. ಹೀಗೇ ಬಿಟ್ಟರೆ ಹುಡುಗ ಹುಲಿ ಸಿಂಹಗಳ ಬಾಯಿಗೆ ಬೀಳುತ್ತಾನೆಂದುಕೊಂಡು, ‘ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ, ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳಿರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಿನಲ್ಲಿದ್ದು ನಾಳೆ ಹೋದೀಯಂತೆ ಬಾ’ ಅಂದ. ಹುಡುಗನಿಗೂ ಅಷ್ಟೇ ಬೇಕಾಗಿತ್ತು. ಬೇಡನೊಂದಿಗೆ ಹೋದ. ಗುಡಿಸಿಲಿಗೆ ಹೋಗಿ ಬೇಡ ಹೆಂಡತಿಗೆ ಹೇಳಿದ. ‘ಅಲೆದಾಡುತ್ತಿದ್ದ, ನಾನೇ ಕರೆದು ತಂದೆ. ಇಂದಿದ್ದು ನಾಳೆ ಹೋಗುತ್ತಾನೆ. ಹಸಿದಿದ್ದಾನು, ಇವನಿಗೆ ಹಣ್ಣು ಹಾಲು ಕೊಡು.’
ಅವಳು ‘ಅದೆಲ್ಲಾ ನನ್ನಿಂದ ಆಗದು. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು. ಇಲ್ಲದಿದ್ದರೆ ಬಿಡು’ ಎಂದಳು. ಬೇಡ ತನ್ನ ಪಾಲಿನ ಹಣ್ಣು, ಹಾಲು ಕೊಟ್ಟ. ‘ಹುಡುಗಾ, ದಣಿದಿದ್ದೀಯಪ್ಪ, ಮಲಗು’ ಅಂದು ಕರುಣೆಯಿಂದ ಹುಡುಗನ ಕಾಲು ತಿಕ್ಕಿದ. ಹಾಸಿಗೆ ಹಾಸಿ ಮಲಗಿಸಿದ. ತನಗೆ ಮಲಗಲು ಸ್ಥಳ ಇರದದ್ದರಿಂದ ಬಾಗಿಲ ಹೊರಗೆ ಕಾಲು ಚಾಚಿ ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದ. ಆದರೆ ರಾತ್ರಿ ಹುಲಿ ಬಂದು ಹೊರಗರ್ಧ ಒಳಗರ್ಧ ಮಲಗಿದ್ದ ಬೇಡನನ್ನು ಕೊಂದು ತಿಂದುಹಾಕಿತು. ರಕ್ತದ ರುಚಿ ಹತ್ತಿ ಒಳಗೆ ಹೋಗಿ ಅವನ ಹೆಂಡತಿಯನ್ನೂ ತಿಂದು ಹಾಕಿತು. ಹೊಟ್ಟೆ ತುಂಬಿದ ಹುಲಿ ಆ ಹುಡುಗನನ್ನು ನೋಡದೆ ಹಾಗೇ ಹೋಯಿತು. ಮುಂಜಾನೆ ಇವನೆದ್ದು ನೋಡಿದರೆ ಇಬ್ಬರ ಎಲುಬುಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ಪಾಪ ಬಹಳ ಅನ್ಯಾಯವಾಯಿತೆಂದು ಹಳಹಳಸಿ ಮತ್ತೆ ಪ್ರಯಾಣ ಮಾಡಿದ.
ದಾರಿಯಲ್ಲಿ ಒಬ್ಬ ರಾಜ ತಲೆಯ ಮೇಲೆ ಕೈ ಹೊತ್ತು ಕೂತಿದ್ದ. ಇವನನ್ನು ನೋಡಿ – ‘ಹುಡುಗಾ, ಎಲ್ಲಿ ಹೊರಟಿರುವೆ?’ ಅಂದ. ‘ಒಂದು ಪ್ರಶ್ನೆಯಿದೆ. ಅದನ್ನು ಕೇಳಲು ಶಿವನ ಬಳಿಗೆ ಹೋಗುತ್ತಿದ್ದೇನೆ’ ಎಂದ. ‘ಹಾಗಿದ್ದರೆ ನನ್ನದೂ ಒಂದು ಪ್ರಶ್ನೆ ಇದೆ. ಕೇಳಿಕೊಂಡು ಬರುತ್ತೀಯಾ?’ ಎಂದ ರಾಜ. ಏನದು?‘ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ. ತಟ್ಟಂತ ಒಂದು ಹನಿ ನೀರಿಲ್ಲ. ಯಾಕೆಂದು ಕೇಳಿಕೊಂಡು ಬರುತ್ತೀಯಾ’. ಆಗಲೆಂದು ಹುಡುಗ ಮುಂದೆ ಹೊರಟ. ಮುಂದೆ ಹೋಗುವಷ್ಟರಲ್ಲಿ ಒಬ್ಬ ಕುಂಟ ಕುಳಿತಿದ್ದ. ಅವನೂ, ‘ತಮ್ಮಾ, ನನ್ನ ಕುಂಟುತನಕ್ಕೆ ಏನು ಕಾರಣವೆಂದು ಕೇಳಿಕೊಂಡು ಬಾ’ ಅಂದ. ಆಗಲೆಂದು ಹುಡುಗ ಮುಂದೆ ಹೊರಟ. ಮುಂದೆ ದಾರಿಯಲ್ಲಿ ಒಂದು ಹುತ್ತ ಸಿಕ್ಕಿತು. ಅದರಲ್ಲಿ ಅರ್ಧ ಒಳಗೂ ಸಿಕ್ಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸಲಾರದ ಒಂದು ಸರ್ಪವಿತ್ತು. ಅದಕ್ಕೂ ತನ್ನ ಪ್ರಯಾಣದ ಉದ್ದೇಶ ಹೇಳಿದ. ಅದು ‘ನನ್ನ ಇಂಥ ಸ್ಥಿತಿಗೆ ಏನು ಕಾರಣ ಕೇಳಿಕೊಂಡು ಬಾ’ ಎಂದಿತು. ಹುಡುಗ ಆಗಲೆಂದು ಹೇಳಿ ಮುಂದಕ್ಕೆ ಹೊರಟ.
ಹೋದ, ಹೋದ. ಸೀದಾ ಕೈಲಾಸ ಪರ್ವತಕ್ಕೇ ಹೋದ. ಅಲ್ಲಿ ಶಿವ ಪಾರ್ವತಿ ಕುಳಿತಿದ್ದರು. ಹೋಗಿ ನಮಸ್ಕರಿಸಿದ. ‘ಶಂಭೋ, ಅನ್ನದಾನದ ಪುಣ್ಯ ಏನು? ಹೇಳಬೇಕು’ ಎಂದ. ಅದಕ್ಕೆ ಶಿವನು,ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆನ್ನುವುದನ್ನು ಹೇಳುತ್ತದೆ’ ಎಂದ. ಹಾಗೆಯೇ ರಾಜನ ಕೆರೆಯಲ್ಲಿ ನೀರು ಬೀಳದಿರುವ ಕಾರಣ ಕೇಳಿದ. ಅದಕ್ಕೆ ಶಿವನು ಹೇಳಿದ – ‘ರಾಜನಿಗೆ ಬೆಳೆದ ಒಬ್ಬ ಮಗಳಿದ್ದಾಳೆ. ಅವಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದೆ.’ ‘ಹಾಗೆ ಕುಂಟನ ಕಾಲು ಯಾಕೆ ಹೋಗಿವೆ?’ ‘ತನಗೆ ತಿಳಿದ ವಿದ್ಯೆಯನ್ನು ಆತ ಯಾರಿಗಾದರೂ ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತವೆ.’ ‘ಸರ್ಪವೊಂದು ಹುತ್ತದ ಒಳಗೂ ಹೋಗದೆ ಹೊರಗೂ ಬರಲಾರದೆ ಸಿಕ್ಕಿಕೊಂಡಿದೆಯಲ್ಲ. ಏನು ಕಾರಣ?’ ‘ತನ್ನ ನೆತ್ತಿಯ ರತ್ನವನ್ನು ಯಾರಾದರೂ ಯೋಗ್ಯನಿಗೆ ದಾನ ಮಾಡದಲ್ಲಿ ಅದು ಸರಿದಾಡಬಹುದು.’
– ಹೀಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿಕೊಂಡು ಶಿವಪಾರ್ವತಿಯರಿಗೆ ನಮಸ್ಕರಿಸಿ, ಪ್ರಸಾದ ತೆಗೆದುಕೊಂಡು ತಿರುಗಿ ಬಂದ. ಬರುವಾಗ ದಾರಿಯಲ್ಲಿ ಮೊದಲು ಸರ್ಪ ಸಿಕ್ಕಿತು. ‘ಹುಡುಗಾ, ಕೇಳಿದೆಯಾ ನನ್ನ ಪ್ರಶ್ನೆ?’ ಎಂದಿತು. ‘ಹೌದು ಕೇಳಿದೆ. ನಿನ್ನ ನೆತ್ತಿಯಲ್ಲೊಂದು ರತ್ನ ಇದೆಯಂತೆ. ಅದನ್ನು ಯೋಗ್ಯನಿಗೆ ದಾನ ಮಾಡಿದರೆ ನೀನು ಸರಿದಾಡಬಹುದಂತೆ’ ಎಂದ. ‘ಹಾಗಿದ್ದರೆ ಇಕೊ, ನಿನಗೇ ಅದನ್ನು ದಾನ ಮಾಡುತ್ತೇನೆ. ತಕೋ’ ಎಂದು ತನ್ನ ನೆತ್ತಿಯ ರತ್ನವನ್ನು ಹುಡುಗನಿಗೆ ಕೊಟ್ಟಿತು. ಆ ಕೂಡಲೇ ಅದಕ್ಕೆ ಸರಿದಾಡುವ ಶಕ್ತಿ ಬಂದು, ಆನಂದದಿಂದ ಹೆಡೆ ತೆಗೆದು ಆಡಲಾರಂಭಿಸಿತು. ಹುಡುಗ ಮತ್ತೆ ತನ್ನ ದಾರಿ ಹಿಡಿದ.
ಮುಂದೆ ಬರುವಷ್ಟರಲ್ಲಿ ಕುಂಟ ಸಿಕ್ಕಿದ. ‘ಹುಡುಗಾ, ನನ್ನ ಪ್ರಶ್ನೆ ಕೇಳಿದೆಯಾ?’ ಎಂದು ಕೇಳಿದ. ನಿನ್ನ ಹತ್ತಿರ ಇರುವ ವಿದ್ಯೆಯನ್ನೆಲ್ಲ ಒಬ್ಬ ಯೋಗ್ಯನಿಗೆ ದಾನ ಮಾಡಿದರೆ ನಿನ್ನ ಕಾಲು ಬರುತ್ತವಂತೆ.’’ ಎಂದ ಹುಡುಗ. ‘ಹಾಗಿದ್ದರೆ ನಿನ್ನಂತ ಯೋಗ್ಯ ಯಾರಿದ್ದಾರು? ಇಕೊ, ನನಗೆ ಗೊತ್ತಿರುವ ವಿದ್ಯೆಯನ್ನು ನಿನಗೆ ದಾನ ಮಾಡುತ್ತೇನೆ.’ – ಎಂದು ಹೇಳಿ ಕುಂಟ ತನ್ನ ಅರವತ್ತ ನಾಲ್ಕು ವಿದ್ಯೆಗಳನ್ನೆಲ್ಲ ಇವನಿಗೆ ಧಾರೆಯೆರದ. ಅವನಿಗೆ ಕಾಲು ಬಂದವು. ಆನಂದದಿಂದ ಕುಣಿದಾಡಿದ. ಹುಡುಗ ಮತ್ತೆ ತನ್ನ ದಾರಿಯನ್ನು ಹಿಡಿದು ಹೊರಟ. ಇನ್ನಷ್ಟು ಮುಂದೆ ಬಂದ. ತಲೆಯ ಮೇಲೆ ಕೈ ಹೊತ್ತಿದ್ದ ರಾಜ ಸಿಕ್ಕಿದ. ಇವನನ್ನು ಕಂಡೊಡನೆ ‘ಹುಡುಗಾ, ನನ್ನ ಮಾತನ್ನು ಕೇಳಿದೆಯಾ?’ ಎಂದ. ‘ಹೌದು, ಕೇಳಿದೆ. ನಿನ್ನ ಬೆಳೆದ ಮಗಳನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದಂತೆ’.
‘ನಿನಗಿಂತ ಯೋಗ್ಯ ವರ ಇನ್ನಾರಿದ್ದಾರು! ಬಾ’ ಎಂದು ಹೇಳಿ ರಾಜ ತನ್ನ ಮಗಳನ್ನು ಆ ಹುಡುಗನಿಗೆ ಮದುವೆ ಮಾಡಿಕೊಟ್ಟ. ಬೆಳಗಾಗುವಷ್ಟರಲ್ಲಿ ಕೆರೆ ನೀರಿನಿಂದ ತುಂಬಿ ತುಳುಕಲಾರಂಭಿಸಿತು. ಹುಡುಗ ಹೆಂಡತಿಯನ್ನು ಕರೆದುಕೊಂಡು ನೇಪಾಳ ದೇಶಕ್ಕೆ ಬಂದ. ಆ ದೇಶದ ರಾಜನ ಹೆಂಡತಿ ದಿನ ತುಂಬಿದ್ದರೂ ಹಡೆಯಲಾರದೆ ಸಂಕಟ ಪಡುತ್ತಿದ್ದಳು. ಹುಡುಗ ಹೋಗಿ ಶಿವನ ಪ್ರಸಾದ ಕೊಟ್ಟ. ಅವಳು ಆ ಕ್ಷಣವೇ ಬಂಗಾರದಂಥ ಮಗನನ್ನು ಹಡೆದಳು. ‘ಆ ಕೂಸಿಗೊಂದು ಪ್ರಶ್ನೆ ಕೇಳಬೇಕಾಗಿದೆ. ದರ್ಬಾರಿಗೆ ತರಿಸಬೇಕು’ ಎಂದು ಹುಡುಗ ಹೇಳಿದ. ಎಲ್ಲರಿಗೂ ಆಶ್ಚರ್ಯವಾಯಿತು. ಆದರೂ ಕೂಸನ್ನು ದರ್ಬಾರಿಗೆ ತಂದು ಬಂಗಾರದ ತಟ್ಟೆಯಲ್ಲಿಟ್ಟರು. ಹುಡುಗ ಹೇಳಿದ – ‘ಮಗು, ಶಿವ ನನ್ನನ್ನು ನಿನ್ನ ಬಳಿ ಕಳಿಸಿದ್ದಾನೆ. ಅನ್ನದಾನದ ಪುಣ್ಯ ಯಾವುದು?’ ಈ ಮಾತನ್ನು ಕೇಳಿ ತಟ್ಟೆಯಲ್ಲಿದ್ದ ಮಗು ಪಕ ಪಕ ನಕ್ಕು ಮಾತಾಡಿತು. ‘ಅಯ್ಯ, ಶಿವನನ್ನು ಕಂಡು ಬಂದರೂ ನಿನಗೆ ಈ ವಿಚಾರ ತಿಳಿಯಲಿಲ್ಲವೆ? ನೀನು ಶಿವನನ್ನು ಕಾಣುವುದಕ್ಕೆ ಹೊರಟಿದ್ದಿ. ಅಡವಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದಿ. ಆಗ ಒಬ್ಬ ಬೇಡ ಬಂದು ನಿನ್ನನ್ನು ತನ್ನ ಗುಡಿಸಿಲಿಗೆ ಕರೆದೊಯ್ದು ಹಣ್ಣು ಹಾಲು ಕೊಟ್ಟದ್ದು ನೆನಪಿದೆಯೆ?’
‘ಹೌದು. ’‘ಹಾಗೆ ಮಾಡಿದ ಬೇಡ ನಾನೇ. ಅಂದೆ ನನ್ನನ್ನೂ ನನ್ನ ಹೆಂಡತಿಯನ್ನೂ ಹುಲಿ ತಿಂದಿತು; ಅನ್ನದಾನ ಮಾಡಿದ್ದಕ್ಕೆ ನಾನಿಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ನನ್ನ ಹೆಂಡತಿ ಅಂದು ನಿನಗೆ ಅನ್ನ ಕೊಡಲು ಒಪ್ಪಲಿಲ್ಲ. ಈ ಕಿರಿಕ್ ಮಾಡಿದ ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ. ಬೇಕಾದರೆ ಹೋಗಿ ನೋಡು’ ಎಂದು ಆ ಮಗು ಹೇಳಿತು.ಆಗ ಈ ಹುಡುಗ ತಿರುಗಿ ತನ್ನ ತಾಯಿಯ ಬಳಿಗೆ ಬಂದು ತಾನೂ ಅನ್ನದಾನ ಮಾಡುತ್ತ ಸುಖದಿಂದ ಇದ್ದ.