ಆಷಾಡ ಮಾಸ ಜನ ಹೇಳುವ ಹಾಗೆ ಅಶುಭವೇನಲ್ಲ. ಏಕೆ ಗೊತ್ತೇ?
ಆಷಾಡ ಮಾಸ ಎಂಬುದು ಅಶುಭ ಮಾಸ , ಈ ಸಮಯದಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ನಡೆಸಬಾರದು ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಮದುವೆ ಸಮಾರಂಭ ಆಗಲಿ ಅಥವಾ ಮದುವೆ ಮಾತುಕತೆಗಳು, ಗೃಹ ಪ್ರವೇಶ, ಉಪನಯನ, ಯಾವುದೇ ವಸ್ತು ಖರಿದಿಯಾಗಲಿ, ವಾಹನ ,ಜಾಗದ ಖರೀದಿ ಆಗಲಿ ಮಾಡುವುದಿಲ್ಲ. ಎಲ್ಲಾ ಶುಭ ಕಾರ್ಯಗಳಿಗೂ ಇದು ಅಶುಭ ಮಾಸ ಎಂದೇ ಬಿಂಬಿಸಲಾಗಿದೆ. ಹಾಗಾದರೆ ಈ ಆಷಾಡ ಮಾಸದ ಮಹತ್ವಗಳನ್ನು ನಾವು ಇಂದು ತಿಳಿಯೋಣ.
ಆಷಾಢ ಮಾಸದ ಮಹತ್ವ
ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಆಷಾಡ ಮಾಸದಲ್ಲಿ. ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢ ಮಾಸದಲ್ಲಿ. ಲೋಕ ಕಲ್ಯಾಣಕ್ಕಾಗಿ ಪರಶಿವನು ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಇದೇ ಆಷಾಡ ಮಾಸದಲ್ಲಿ. ಪರ್ವತ ರಾಜನ ಮಗಳು ಗಂಗೆ ಶಿವನ ವರದಂತೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಇದೇ ಮಾಸದಲ್ಲಿ. ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದು ಇದೇ ಆಷಾಡದಲ್ಲಿ ಮಾಸದಲ್ಲಿ.
ಆಷಾಡದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು, ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ, ಮತ್ತು ಮುತ್ತೈದೆಯರು ತಮ್ಮ ಗಂಡಂದಿರ ದೀರ್ಘ ಆಯುಷ್ಯಕ್ಕಾಗಿ ವ್ರತಾಚರಣೆ ಮಾಡುವುದು ಕೂಡ ಇದೆ ಆಷಾಡ ಮಾಸದಲ್ಲಿ. ಇದೆ ಆಷಾಡ ಮಾಸದಲ್ಲಿ ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ ಎಂಬ ಉಲ್ಲೇಖ ಪುರಾಣಗಳಲ್ಲಿ ಇದೆ. ಇಂದ್ರನು ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದಿರುವುದಾಗಿ ಪುರಾಣಗಳು ಹೇಳುತ್ತವೆ.
ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ. ಆಷಾಡ ಮಾಸದಲ್ಲೇ ಮುಸ್ಲಿಂರು ರೋಜಾ ಆಚರಿಸುವುದು. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ ಮತ್ತು ಕೆಲವು ನಿರ್ಧಿಷ್ಟ ವ್ರತಾಚರಣೆಯ ಇದು ಶುಭ ಗಳಿಗೆ ಎಂದು ಹೇಳಲಾಗುತ್ತದೆ. ಆದ್ದರಿಂದ ಆಷಾಡ ಮಾಸ ಅಶುಭ ಎಂದು ಯೋಚಿಸುವುದು ಬಿಟ್ಟು ಅದರ ಮಹತ್ವವನ್ನು ತಿಳಿಯಲು ಪ್ರಯತ್ನಿಸೋಣ.