ಇಂದು ಪ್ರಥಮ ಏಕಾದಶಿ ಅಥವಾ ಆಷಾಡ ಏಕಾದಶಿ ಎನ್ನುವರು. ಈ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಏಕೆ ಕರೆಯುತ್ತಾರೆ?

658

ಆಷಾಢ ಮಾಸದ ಶುಕ್ಕ ಪಕ್ಷದಲ್ಲಿನ ಏಕಾದಶಿಯನ್ನು “ದೇವಶಯನಿ” (ದೇವರ ನಿದ್ರೆಯ) /’ಶಯನೈಕಾದಶಿ” ಎನ್ನುತ್ತಾರೆ. ಕಾರಣ ಅಂದು ಮಹಾವಿಷ್ಣುವು ಆದಿಶೇಷ ತಲ್ಪದಲ್ಲಿ ಯೋಗನಿದ್ರೆಯಲ್ಲಿ ಮಲಗುತ್ತಾನೆ. ಅವನು ಏಳುವುದು ಕಾರ್ತಿಕ ಶುದ್ಧ ದ್ವಾದಶಿಯಂದು.ಅದನ್ನು “ಉತ್ಥಾನ(ಏಳುವುದು)ದ್ವಾದಶಿ” ಎಂದು ಕರೆಯುವರು. ಹಿಂದೆ ದೇವ ದಾನವರ ಯುದ್ಧವಾದಾಗ, ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಈಶ್ವರನಿಂದ ಅಮರತ್ವವನ್ನು ಪಡೆದು ತ್ರಿಮೂರ್ತಿಗಳಾದಿಯಾಗಿ ಎಲ್ಲ ದೇವತೆಗಳನ್ನು ಸೋಲಿಸಿ ಸ್ವರ್ಗದಿಂದ ಓಡಿಸಿದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗಿನ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಆ ದಿನವು ಆಷಾಢ ಶುದ್ಧ ಏಕಾದಶಿಯಾಗಿತ್ತು.

ಅನಿವಾರ್ಯವಾಗಿ ಅವರು ಅಂದು ಉಪವಾಸ ಮಾಡುವಂತಾಯಿತು. ಅವರ ಉಪವಾಸದ ಫಲವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಆವಿರ್ಭವಿಸಿ,ಗುಹೆಯ ಬಾಗಿಲಿನಲ್ಲಿ, ದೇವತೆಗಳು ಹೊರಬರುವುದನ್ನು ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು.

ಈ ಶಕ್ತಿದೇವತೆಯೇ ಏಕಾದಶಿ ತಿಥಿಯ ಅಧಿದೇವತೆಯಾಗಿದ್ದಾಳೆ.
ಅಂದಿನಿಂದ ಪ್ರಥಮೈಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯ ವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ಮಾಡುವ ಪದ್ಧತಿ ಆರಂಭವಾಯಿತು.

ಏಕಾದಶಿಯಂದು ಸ್ನಾನ ಮಾಡಿ,ವಿಷ್ಣುವನ್ನು ತುಳಸಿ ಕುಡಿಯಿಂದ ಭಕ್ತಿಯಿಂದ ಅರ್ಚಿಸಿ,ತೀರ್ಥಪ್ರಾಶನ ಮಾಡಿ,ಅಹೋರಾತ್ರಿ ವಿಷ್ಣುನಾಮ ಸಂಕೀರ್ತನೆ, ಭಜನೆ ಮಾಡುತ್ತ ಜಾಗರಣೆ ಮಾಡಿ,ದ್ವಾದಶಿಯ ದಿನ ಬೆಳಿಗ್ಗೆ ಸ್ನಾನ ಪೂಜೆ ಮುಗಿಸಿ,ನೈವೇದ್ಯ ಮಾಡಿದ ಪದಾರ್ಥಗಳನ್ನು ಸೇವಿಸಿ,ಉಪವಾಸ ಮುಕ್ತಾಯದ ಪಾರಣೆ ಮಾಡಬೇಕು. ಸಾಮಾನ್ಯವಾಗಿ ಶಯನ ಏಕಾದಶಿಯಿಂದ,ಉತ್ಥಾನದ್ವಾದಶಿವರೆಗೆ, ವಿಷ್ಣುವು ಯೋಗನಿದ್ರಾವಸ್ಥೆಯಲ್ಲಿ ರುವುದರಿಂದ,ಮದುವೆ ,ಉಪನಯನ, ಗೃಹಪ್ರವೇಶಾದಿ ಮಂಗಳ ಕಾರ್ಯಗಳನ್ನು ನೆರವೇರಿಸುವುದಿಲ್ಲ.

ಉತ್ಥಾನ ದ್ವಾದಶಿಯಂದೇ ವಿಷ್ಣುವು ತುಲಸಿಯನ್ನು ವಿವಾಹವಾದುದು. ನೆಲ್ಲಿ ಮರದ ಕೆಳಗಿನ ಗುಹೆ ದೇವತೆಗಳನ್ನು ರಕ್ಷಿಸಿತ್ತು. ಇವೆರಡರ ಸವಿನೆನಪಿನಲ್ಲಿ ನೆಲ್ಲಿ ಕೊಂಬೆಯನ್ನು ತುಳಸಿಗಿಡದೊಂದಿಗೆ ಇಟ್ಟು “ತುಳಸಿ ಹಬ್ಬ/ತುಳಸಿದೀಪ” ಎಂದು ಪೂಜೆ, ದೀಪಾರಾಧನೆ ಮಾಡುವುದು ಆಚರಣೆಗೆ ಬಂದಿದೆ.

ಪಂಢರಪುರದ ವಿಟ್ಠಲನ ಭಕ್ತರು ನೂರಾರು ಮೈಲಿ ದೂರದ ತಮ್ಮ ಊರಿನಿಂದ ವಿಟ್ಠಲನ ಭಜನೆ ಮಾಡುತ್ತ ಸಾಕಷ್ಟು ದಿನ ಮೊದಲೇ ಹೊರಟು ಕಾಲ್ನಡಿಗೆಯಲ್ಲಿಯೇ ಏಕಾದಶಿಗೆ ಮೊದಲು ಪಂಢರಪುರ ಸೇರಿ, ಅಂದು ವಿಟ್ಠಲನ ದರ್ಶನ ಮಾಡುತ್ತಾರೆ.ಇದನ್ನು “ವಾರ್ಕರಿ” ಅಥವಾ “ವಾರಕರಿಗಳು” ಎಂದು ಹೇಳುತ್ತಾರೆ.ಅವರಿಗೆ ವಿಟ್ಠಲನ ಪಾದ ಮುಟ್ಟಿ ನಮಸ್ಕರಿಸಲು ಮತ್ತು ಬೇಗ ದರ್ಶನವಾಗುವಂತೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಅಲ್ಲಿದೆ. ಆಷಾಢ ಶುದ್ಧ ಏಕಾದಶಿಯಂದು ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನೆಂದು,ಈಗಲೂ ಆ ದಿನ ವಿಷ್ಣುವು ಅಲ್ಲಿಗೆ ಬಂದು ಭಕ್ರನ್ನು ಹರಸುತ್ತಾನೆಂದು ಪ್ರತೀತಿ ಇದೆ.

ವಿಷ್ಣುವಿನ ಭಕ್ತರು, ಮಾಧ್ವ ಸಂಪ್ರದಾಯದ ಬಂಧುಗಳು ಈ ಒಂಬತ್ತು ಏಕಾದಶಿ ಮಾತ್ರವಲ್ಲದೆ ವರ್ಷದ ಎಲ್ಲ ಏಕಾದಶಿಯಲ್ಲಿಯೂ ನಿರಾಹಾರ ಉಪವಾಸ ವ್ರತ ಆಚರಿಸುತ್ತಾರೆ. ಅದಾಗದವರು ಆಷಾಢ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಒಂಬತ್ತು ಏಕಾದಶಿಗಳಂದು ಉಪವಾಸ ವ್ರತ ಆಚರಿಸುತ್ತಾರೆ.

ವೈಜ್ಞಾನಿಕ ಮತ್ತು ವೈದ್ಯಕೀಯವಾಗಿಯೂ ವಾರದಲ್ಲಿ,ಅಥವಾ ಪಕ್ಷದಲ್ಲಿ ಒಂದು ದಿನ ಉಪವಾಸ ಮಾಡುವುದು ದೇಹ ಮತ್ತು ಆರೋಗ್ಯಕ್ಕೆ ಪರಿಣಾಮಕಾರಿ ಮತ್ತು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ. ಏಕಾದಶಿವ್ರತ ನಿಷ್ಠೆಯಿಂದ ಮಾಡಿ ಮೋಕ್ಷ ಪಡೆದ ಮಹರ್ಷಿಗಳ, ಮಹಾರಾಜ ಅಂಬರೀಷ,ಮೊದಲಾದವರ ಕತೆ ಪುರಾಣಗಳಲ್ಲಿವೆ. ಓಂ ನಮೋ ನಾರಾಯಣಾಯ.

Leave A Reply

Your email address will not be published.