ರಾಮಾಯಣ ಯು’ದ್ಧದ ನಂತರ ವಾನರ ಸೇನೆ ಏನಾಯ್ತು? ರಾಮಾಯಣದ ಕಥೆಯಲ್ಲಿ ಬರುವ ಈ ಸನ್ನಿವೇಶ ನೀವು ಓದಲೇಬೇಕು.
ರಾಮಾಯಣ ಮಹಾಕಾವ್ಯದ ಉತ್ತರಕಾಂಡದ ಒ೦ದು ಭಾಗದಲ್ಲಿ, ರಾಮಾಯಣದ ನಂತರದ ಕಾಲಘಟ್ಟದಲ್ಲಿ ವಾನರ ಸೇನೆಯ ವಿವಿಧ ವಾನರರ ಕಥೆ ಏನಾಯಿತೆಂಬುದನ್ನು ವಿವರಿಸಲಾಗಿದೆ. ಭೂಮಿಯ ಮೇಲಿನ ರಾಮಾವತಾರದ ಅವಧಿಯು ಸಮಾಪ್ತಿಗೊಳ್ಳಲು ಕಾಲವು ಸನ್ನಿಹಿತವಾಗಿದೆಯೆಂದು ಯಮಧರ್ಮನು ಶ್ರೀ ರಾಮಚಂದ್ರನಲ್ಲಿ ಪ್ರಸ್ತಾಪಿಸಿದಾಗ, ಶ್ರೀ ರಾಮನು ಸರಯೂ ನದಿಯನ್ನು ಪ್ರವೇಶಿಸುವುದರ ಮೂಲಕ ಭೂಮಿಯಿಂದ ಬೇರಾಗಲು ತಯಾರಿಗೊಳ್ಳುವನು.
ಅಂಗದನ ನೇತೃತ್ವ: ಸುಗ್ರೀವನು ರಾಮಾವತಾರದ ಸಮಾಪ್ತಿಯ ಕುರಿತಂತೆ ಅರಿತುಕೊಂಡಾಗ, ವಾನರ ಸಾಮ್ರಾಜ್ಯವಾದ ಕಿಷ್ಕಿಂಧೆಯ ಆಧಿಪತ್ಯವನ್ನು ವಾಲಿಯ ಮಗನಾದ ಅಂಗದನಿಗೆ ವಹಿಸಿ, ಆ ಬಳಿಕ ಸುಗ್ರೀವ ಹಾಗೂ ಆತನ ಅನುಯಾಯಿಗಳಾಗಿದ್ದ ವಾನರ ಪಡೆಯ ಗುಂಪೊಂದು ಸೇರಿದಂತೆ ರಾಮನೊಂದಿಗೆ ಜತೆಗೂಡಿ ಭೂಮಿಯ ಋಣವನ್ನು ಕಡಿದುಕೊಳ್ಳುವುದಕ್ಕಾಗಿ ಅಯೋಧ್ಯೆಯತ್ತ ತೆರಳುತ್ತಾರೆ.
ವಾನರರು: ಇದಾದ ಬಳಿಕ ಕರಡಿಗಳು (ಜಾಂಬವ) ಹಾಗೂ ರಾಕ್ಷಸರೊಂದಿಗೆ ಒಡಗೂಡಿದ ವಾನರರು ಸಭೆ ಸೇರಲಾರಂಭಿಸುತ್ತಾರೆ. ಭೂಮಿಯನ್ನು ತೊರೆದು ವೈಕುಂಠಲೋಕಕ್ಕೆ ನಿರ್ಗಮಿಸುವ ಶ್ರೀ ರಾಮಚಂದ್ರನ ನಿರ್ಧಾರವನ್ನು ತಿಳಿದುಕೊಂಡ ವಾನರರು, ಋಷಿಗಳು ಹಾಗೂ ಗಂಧರ್ವರೊಡನೆ ಶ್ರೀ ರಾಮಚಂದ್ರನನ್ನು ಕಾಣಲು ಬಂದರು.
ಇವೆರೆಲ್ಲರೂ ಶ್ರೀ ರಾಮಚಂದ್ರನಿಗೆ ಏನು ಹೇಳಿದರು?
ಇವರೆಲ್ಲರೂ ಶ್ರೀ ರಾಮನ ಕುರಿತಂತೆ ಹೀಗೆ ಹೇಳುವರು, “ಎಲೈ ಶ್ರೀ ರಾಮನೇ, ಪುರುಷೋತ್ತಮನೇ (ಸಮಸ್ತ ಮಾನವ ವರ್ಗಕ್ಕೆ ಆದರ್ಶಪ್ರಾಯದವನು), ನೀನು ನಮ್ಮೆಲ್ಲರನ್ನೂ ತೊರೆದು ವೈಕುಂಠಲೋಕಕ್ಕೆ ತೆರಳಿದರೆ, ಅದು ನಮ್ಮೆಲ್ಲರ ಮೇಲೆ ಬಂದೆರಗಿದ ಯಮಪಾಶಕ್ಕೆ ಸಮ” ಎಂದು ತಮ್ಮ ಮನದ ಅಳಲನ್ನು ತೋಡಿಕೊಳ್ಳುವರು. ವಾನರರಲ್ಲಿಯೇ ಅತೀ ಬಲಶಾಲಿಯಾದ ಸುಗ್ರೀವನೂ ಕೂಡಾ ಶ್ರೀ ರಾಮಚಂದ್ರನಿಗೆ ವ೦ದಿಸುತ್ತಾ ಹೀಗೆ ಹೇಳುವನು, “ಎಲೈ ಪುರುಷಶ್ರೇಷ್ಟನೇ, ನಾನು ಅಂಗದನನ್ನು ಕಿಷ್ಕಿಂಧಾಧಿಪತಿಯಾಗಿ ನೇಮಿಸಿ ಈಗ ನಿನ್ನಲ್ಲಿಗೆ ಬಂದಿರುವೆನು. ಎಲೈ ದೊರೆಯೇ, ನಾನೂ ಕೂಡಾ ನಿನ್ನನ್ನೇ ಅನುಸರಿಸಲು ಬಂದಿರುವೆನು” ಎಂದು ಅಲವತ್ತುಕೊಳ್ಳುತ್ತಾನೆ.
ಶ್ರೀ ರಾಮಚಂದ್ರನು ಒಪ್ಪಿಕೊಳ್ಳುವನು: ವಾನರಶ್ರೇಷ್ಟರ ಮಾತುಗಳೆಲ್ಲವನ್ನೂ ಆಲಿಸಿದ ಬಳಿಕ, ಶ್ರೀ ರಾಮಚಂದ್ರನು ಅವರ ಕೋರಿಕೆಗಳನ್ನು ನೆರವೇರಿಸಲು ಒಪ್ಪಿಕೊಳ್ಳುತ್ತಾನೆ. ಶ್ರೀ ರಾಮನು ತನ್ನ ಪರಮಾಪ್ತನಾದ ಹನುಮಂತನಲ್ಲಿ ಹೀಗೆ ಹೇಳುತ್ತಾನೆ, “ಹನುಮನೇ, ನೀನು ಚಿರಂಜೀವಿಯು. ಜಗತ್ತಿನಲ್ಲಿ ಎಂದಿನವರೆಗೆ ನನ್ನ ಇತಿಹಾಸದ ಮನನ, ಶ್ರವಣಗಳು ನಡೆಯಲ್ಪಡುವವೋ, ಅಲ್ಲಿಯವರೆಗೂ ನೀನೂ ಕೂಡಾ ಸ್ತುತಿಸಲ್ಪಡುವೆ.
ವಾನರನು ಪ್ರಮುಖವಾಗಿ ಕಾಣಿಸಿಕೊಳ್ಳುವ ಪ್ರಕರಣಗಳು: ಈ ಘಟನೆಯ ಬಳಿಕ ವಾನರನ ಪುನರಾಗಮನದ ಸಂದರ್ಭವು ಯಾವುದೆಂದರೆ ಯುಗವೊಂದರ ಬಳಿಕ ಭಗವಾನ್ ಶ್ರೀ ಹನುಮಂತ ಹಾಗೂ ಪಾಂಡವರ ಭೇಟಿ. ಮಹಾಭಾರತದ ವಾನರಪರ್ವದಲ್ಲಿ, ಭಗವಾನ್ ಹನುಮನು ಭೀಮಸೇನನ ಮಾರ್ಗವನ್ನು ಹಿಮಾಲಯದ ತಪ್ಪಲಲ್ಲಿರುವ ಗಂಧಮಾದನ ಪರ್ವತದ ಬಳಿ ತಡೆಹಿಡಿದಿರುವ ಕುರಿತು ವಿವರಿಸಲಾಗಿದೆ. ಹನುಮಂತ ಹಾಗೂ ಭೀಮಸೇನರಿಬ್ಬರೂ ವಾಯುದೇವನ ಪುತ್ರರೂ, ಸಹೋದರರೂ ಆಗಿರುವರು.
ಕೃಷ್ಣ ಹಾಗೂ ಜಾಂಬವಂತ: ಮತ್ತೊಂದು ಪ್ರಕರಣದಲ್ಲಿ, ಭಗವಾನ್ ಶ್ರೀ ಕೃಷ್ಣನು ಶ್ಯಮಂತಕ ಮಣಿಯನ್ನು ಕದ್ದಿರುವನೆಂಬ ಸುಳ್ಳು ಆಪಾದನೆಗೆ ಗುರಿಯಾಗುವುದನ್ನು ಹಾಗೂ ತನ್ನ ಕುರಿತಂತೆ ಕೇಳಿಬಂದ ಸುಳ್ಳು ಅಪವಾದವನ್ನು ತೊಡೆದು ಹಾಕುವುದರ ಮೂಲಕ ತಾನು ನಿರ್ದೋಷಿಯೆಂದು ನಿರೂಪಿಸಲು ಶ್ರೀ ಕೃಷ್ಣನು ಕೈಗೊಂಡ ಅನ್ವೇಷಣೆಯ ಕುರಿತಂತೆ ಶ್ರೀ ಮದ್ಭಾಗವತವು ವಿವರಿಸುತ್ತದೆ. ವಾಸ್ತವವಾಗಿ ಶ್ಯಮಂತಕ ಮಣಿಯ ಜಾಂಬವಂತನ ಕೈಗಳಲ್ಲಿಯೇ ಬಿದ್ದಿತ್ತು. ಜಾಂಬವಂತನು ಪರ್ವತದ ಗುಹೆಯೊಂದರ ನಿವಾಸಿಯಾಗಿದ್ದು, ತನ್ನ ಪುತ್ರನಿಗೆ ಶ್ಯಮಂತಕ ಮಣಿಯನ್ನು ಆಟವಾಡಲೆಂದು ನೀಡಿರುತ್ತಾನೆ.
ಕೃಷ್ಣ, ಜಾಂಬವಂತರ ನಡುವಿನ ಕಾಳಗ: ಕೃಷ್ಣನು ಶ್ಯಮಂತಕ ಮಣಿಯನ್ನು ಪಡೆದುಕೊಳ್ಳುವುದಕ್ಕೋಸ್ಕರವಾಗಿ ಜಾಂಬವಂತನೊಡನೆ ಕಾದಾಡಬೇಕಾಗುತ್ತದೆ. ಶ್ರೀ ಕೃಷ್ಣನು ತ್ರೇತಾಯುಗದ ಭಗವಾನ್ ಶ್ರೀ ರಾಮಚಂದ್ರನ ಅವತಾರಿಯೆಂದೇ ಮನಗಂಡ ಬಳಿಕ ಜಾಂಬವಂತನ ಆನಂದಕ್ಕೆ ಪಾರವೇ ಇಲ್ಲದಂತಾಗುತ್ತದೆ. ಏಕೆಂದರೆ, ಜಾಂಬವಂತನೆಂಬ ಕರಡಿಯು ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರನ ಪ್ರತಿ ಅತ್ಯಂತ ಸ್ವಾಮಿನಿಷ್ಟೆಯುಳ್ಳವನಾಗಿದ್ದ ಸೇವಕನಾಗಿರುತ್ತಾನೆ.ಶ್ರೀ ಕೃಷ್ಣನೇ ಶ್ರೀ ರಾಮನೆಂದರಿತ ಬಳಿಕ ಜಾಂಬವನು ಮನಃಪೂರ್ವಕವಾಗಿ ಶ್ರೀ ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಒಪ್ಪಿಸುತ್ತಾನೆ ಹಾಗೂ ಜತೆಗೆ ತನ್ನ ಮಗಳನ್ನೂ ಕೂಡ ಶ್ರೀ ಕೃಷ್ಣನಿಗೆ ಧಾರೆಯೆರೆದು ಕೊಡುತ್ತಾನೆ.ಹೀಗೆ ಜಾಂಬವಂತನ ಪುತ್ರಿಯಾದ ಜಾಂಬವತಿಯೂ ಕೂಡ ಶ್ರೀ ಕೃಷ್ಣನ ರಾಣಿಯರಲ್ಲಿ ಓರ್ವಳೆಂದೆನಿಸಿಕೊಳ್ಳುತ್ತಾಳೆ.
ಪಾಂಡವರು ಹಾಗೂ ಇತರ ವಾನರರು: ಯುಧಿಷ್ಟಿರನು ರಾಜಸೂಯಯಾಗವನ್ನು ಕೈಗೊಂಡ ರೀತಿಯ ಬಗ್ಗೆ ಮಹಾಭಾರತದ ಸಭಾಪರ್ವವು ವಿವರಿಸುತ್ತದೆ. ರಾಜಸೂಯಯಾಗದ ಸ೦ದರ್ಭದಲ್ಲಿ ಯುಧಿಷ್ಟಿರನು ತನ್ನ ನಾಲ್ಕು ಸಹೋದರರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿಕೊಡುತ್ತಾನೆ. ಆ ಸಹೋದರರು ಸಾಗುವ ದಿಕ್ಕಿನಲ್ಲಿ ಅವರು ಯಾವ ರಾಜರನ್ನು ಎದುರುಗೊಳ್ಳುವರೋ ಆ ರಾಜರುಗಳು ಒಂದೋ ಶರಣಾಗತರಾಗಿ ಯುಧಿಷ್ಟಿರನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಬೇಕು ಇಲ್ಲವಾದಲ್ಲಿ ಯುದ್ಧಕ್ಕೆ ಸಿದ್ಧರಾಗಬೇಕು, ಹೀಗಿತ್ತು ರಾಜಸೂಯಯಾಗದ ನಿಯಮವು. ದಕ್ಷಿಣ ದಿಕ್ಕಿನಲ್ಲಿ ಸಾಗಿದ ಸಹದೇವನು, ವಾನರ ಸಾಮ್ರಾಜ್ಯವಾದ ಕಿಷ್ಕಿಂಧಾನಗರಿಯನ್ನು ಆ ಅವಧಿಯಲ್ಲಿ ಆಳುತ್ತಿದ್ದ ಮೈಂದ ಹಾಗೂ ದ್ವಿವಿದರೆಂಬ ಇಬ್ಬರು ವಾನರರನ್ನು ಒಂದು ವಾರದವರೆಗೆ ನಡೆದ ಕಾಳಗದಲ್ಲಿ ಸೋಲಿಸಿ ಕಿಷ್ಕಿಂಧೆಯನ್ನು ವಶಪಡಿಸಿಕೊಳ್ಳುತ್ತಾನೆ.
ಕಿಷ್ಕಿಂಧಾನಗರಿಯ ಗುಹೆಗಳು: ಉದ್ದನೆಯ ತೋಳುಗಳುಳ್ಳ ಮಹಾವೀರನಾದ ಸಹದೇವನು ದಕ್ಷಿಣ ದಿಕ್ಕಿನಲ್ಲಿ ಸಾಗುತ್ತಿರಲು, ಕಿಷ್ಕಿಂಧಾನಗರಿಯ ಪ್ರಖ್ಯಾತ ಗುಹೆಗಳಿರುವ ಸ್ಥಳವನ್ನು ತಲುಪುತ್ತಾನೆ.ಅಲ್ಲಿ ಸಹದೇವನು ವಾನರಾಧಿಪತಿಗಳಾದ ಮೈಂದ ಹಾಗೂ ದ್ವಿವಿದರೊಡನೆ ಒ೦ದು ವಾರದ ಕಾಲ ಕಾದಾಡಬೇಕಾಗುತ್ತದೆ. ಆ ಪ್ರಖ್ಯಾತರಾಗಿದ್ದ ವಾನರಾಧಿಪತಿಗಳು ಕಾದಾಟದಿಂದ ಹಿಮ್ಮೆಟ್ಟದೇ, ಸಹದೇವನ ಪರಾಕ್ರಮದತ್ತ ಆಕರ್ಷಿತರಾಗಿ ಆತನತ್ತ ಸ್ನೇಹಹಸ್ತವನ್ನು ಚಾಚುತ್ತಾರೆ. ಆ ವಾನರವೀರರು ಕುರುಕುಲದ ರಾಜಕುಮಾರನಾದ ಸಹದೇವನನ್ನು ಕುರಿತು ಹೀಗೆ ಹೇಳುವರು,”ವ್ಯಾಘ್ರರೂಪೀ ಪಾ೦ಡವ ಸಹೋದರನೇ, ನಮ್ಮೆಲ್ಲರ ಗೌರವಾದರಗಳನ್ನೂ, ಕಾಣಿಕೆಗಳನ್ನೂ ಸ್ವೀಕರಿಸಿ ಕ್ಷೇಮವಾಗಿ ಹಿಂದಿರುಗು. ಯುಧಿಷ್ಟಿರನು ಕೈಗೊಂಡಿರುವ ರಾಜಸೂಯ ಯಾಗವು ನಿರ್ವಿಘ್ನವಾಗಿ ನೆರವೇರಲಿ” ಎ೦ದು ಹಾರೈಸುತ್ತಾರೆ.