ಟೋಲ್ ಸಂಗ್ರಹಕ್ಕೆ ನಿತಿನ್ ಗಡ್ಕರಿಯವರ ದೊಡ್ಡ ಘೋಷಣೆ, ಡ್ರೈವರ್ ಕೆಲಸಗಾರರು ತಕ್ಷಣ ಈ ವಿಷಯದ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ.
ನೀವು ಕೂಡ ರಾಷ್ಟೀಯ ಹೆದ್ದಾರಿಯಲ್ಲಿ ನಿಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಪ್ರಯಾಣ ಮಾಡುವಾಗ ಹಲವು ಬಾರಿ ನೀವು ಟೋಲ್ ಪಾವತಿಸಲು ದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ. ಆದರೆ ಈಗ ಕೇಂದ್ರ ಸಚಿವ ಗಡ್ಕರಿ ಈ ಸಮಸ್ಯೆ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ವಾಹನಗಳಿಗೆ ದೈನಂದಿನ ಟೋಲ್ ಸಂಗ್ರಹದ ಬದಲು ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ನೀಡುವ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದೀಗ ಇರುವ ಒಟ್ಟಾರೆ ಟೋಲ್ ಸಂಗ್ರಹದಲ್ಲಿ ಖಾಸಗಿ ವಾಹನಗಳ ಪಾಲು ಕೇವಲ ಶೇ. 26 ರಷ್ಟಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಗ್ರಾಮಸ್ಥರು ಪ್ರಯಾಣದಲ್ಲಿ ಸಮಸ್ಯೆಗಳನ್ನು ಎದುರಿಸದಂತೆ ಹಳ್ಳಿಗಳ ಹೊರಗಡೆ ಟೋಲ್ ಸಂಗ್ರಹ ಬೂತ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ‘ಟೋಲ್ ಸಂಗ್ರಹದಲ್ಲಿ ಆದಾಯದ ಶೇಕಡಾ 74 ರಷ್ಟು ವಾಣಿಜ್ಯ ವಾಹನಗಳಿಂದ ಬರುತ್ತದೆ. ಖಾಸಗಿ ವಾಹನಗಳಿಗೆ ಮಾಸಿಕ ಅಥವಾ ವಾರ್ಷಿಕ ಪಾಸ್‌ಗಳನ್ನು ಪ್ರಾರಂಭಿಸುವ ಬಗ್ಗೆ ನಾವು ಪರಿಗಣಿಸುತ್ತಿದ್ದೇವೆ’ ಎಂದು ಸಚಿವರು ಹೇಳಿದರು. ಒಟ್ಟು ಟೋಲ್ ಸಂಗ್ರಹದಲ್ಲಿ ಖಾಸಗಿ ವಾಹನಗಳ ಪಾಲು ಕೇವಲ ಶೇಕಡಾ 26 ರಷ್ಟಿದ್ದು, ಸರ್ಕಾರಕ್ಕೆ ಇದರಿಂದ ನಷ್ಟವಾಗುವುದಿಲ್ಲ ಎಂದು ಅವರು ಹೇಳಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road and Highways) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ (Fastag) ಜೊತೆಜೊತೆಗೆ ಹೆಚ್ಚುವರಿ ಸೌಲಭ್ಯವಾಗಿ ತಡೆರಹಿತ ಜಾಗತಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಗಡ್ಕರಿ ಹೇಳಿದರು. GNSS ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಇವಾಗ ಇರುವ ಟೋಲ್ ಸಂಗ್ರಹಕ್ಕಿಂತ ಉತ್ತಮವಾಗಿರುತ್ತದೆ. ಕಳೆದ ವರ್ಷ ಜುಲೈನಲ್ಲಿ ಅಂದರೆ ಜೂಲೈ 2024ರಲ್ಲಿ, ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ (NH)-275 ರ ಬೆಂಗಳೂರು-ಮೈಸೂರು (Bengaluru-Mysore Highway) ವಿಭಾಗ ಮತ್ತು ಹರಿಯಾಣದ NH-709 ರ ಪಾಣಿಪತ್-ಹಿಸಾರ್ ಹೆದ್ದಾರಿಗಳಲ್ಲಿ GNSS ಆಧಾರಿತ ಬಳಕೆದಾರ ಟೋಲ್ ಸಂಗ್ರಹ (Toll Collection system) ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಅಧ್ಯಯನವನ್ನು ನಡೆಸಲಾಗಿದೆ ಎಂದು ನಿತಿನ್ ಗಡ್ಕರಿ(Nitin Gadkari) ಹೇಳಿದ್ದಾರೆ.

ಹೆದ್ದಾರಿಗಳಲ್ಲಿ (Highway) ಒಂದು ವಾಹನ ಪ್ರಯಾಣಿಸಿದ ನಿಖರವಾದ ದೂರವನ್ನು ಆಧರಿಸಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ವಿಧಿಸುವುದು ಈ ಹೊಸ ಸಂಗ್ರಹ ವ್ಯವಸ್ಥೆಯ ಗುರಿಯಾಗಿದೆ. 2018-19ನೇ ಹಣಕಾಸು ವರ್ಷದಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರಾಸರಿ ಟೋಲ್ ಗಾಗಿ ಕಾಯುವ ಸಮಯ ಎಂಟು ನಿಮಿಷಗಳಾಗಿತ್ತು. 2020-21 ಮತ್ತು 2021-22ನೇ ಹಣಕಾಸು ವರ್ಷದಲ್ಲಿ ಫಾಸ್ಟ್‌ಟ್ಯಾಗ್ ಜಾರಿಗೆ ತಂದ ನಂತರ, ವಾಹನಗಳ ಸರಾಸರಿ ಟೋಲ್ ಗೆ ಕಾಯುವ ಸಮಯ 47 ಸೆಕೆಂಡುಗಳಿಗೆ ಇಳಿದಿದೆ. ಕೆಲವು ಸ್ಥಳಗಳಲ್ಲಿ, ವಿಶೇಷವಾಗಿ ನಗರಗಳ ಜನನಿಬಿಡ ಪಟ್ಟಣಗಳಲ್ಲಿ ಟೋಲ್ ಕಟ್ಟಲು ಕಾಯುವ ಸಮಯ ಗಮನಾರ್ಹವಾಗಿ ಸುಧಾರಿಸಿದ್ದರೂ, ಟೋಲ್ ಪ್ಲಾಜಾಗಳಲ್ಲಿ ಇನ್ನೂ ಸ್ವಲ್ಪ ವಿಳಂಬವಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.